ಜಾವ -
ಇಂಡೊನೇಷ್ಯ ಗಣರಾಜ್ಯದ ದ್ವೀಪಗಳಲ್ಲೊಂದು. ವಿಸ್ತೀರ್ಣದಲ್ಲಿ ನಾಲ್ಕನೆಯದು. ಸುಮಾತ್ರಕ್ಕೆ ಆಗ್ನೇಯದಲ್ಲಿ, ಬೋರ್ನಿಯೋಗೆ ದಕ್ಷಿಣದಲ್ಲಿ, ಜಾವ ಸಮುದ್ರ ಮತ್ತು ಹಿಂದೂ ಸಾಗರಗಳ ನಡುವೆ ಇದೆ. ಪಶ್ಚಿಮದಲ್ಲಿ ಸುಮಾತ್ರ ದ್ವೀಪದಿಂದ ಸುಂದ ಜಲಸಂಧಿಯೂ ಪೂರ್ವದಲ್ಲಿ ಬಾಲೀ ದ್ವೀಪದಿಂದ ಬಾಲೀ ಜಲಸಂಧಿಯೂ ಇದನ್ನು ಪ್ರತ್ಯೇಕಿಸುತ್ತವೆ. ಜಾವದ ಉತ್ತರದಲ್ಲಿ ಜಾವ ಸಮುದ್ರವೂ ದಕ್ಷಿಣದಲ್ಲಿ ಹಿಂದೂ ಸಾಗರವೂ ಇವೆ. ಪೂ.ರೇ.105ಲಿ 12`-114ಲಿ 35` ಮತ್ತು ದ.ಅ.5ಲಿ 52`-8ಲಿ 47` ನಡುವೆ ಹಬ್ಬಿರುವ ಜಾವ ದ್ವೀಪದ ಉದ್ದ 661 ಮೈ. ಗರಿಷ್ಠ ಅಗಲ 124 ಮೈ. ಮಧುರ ದ್ವೀಪವೂ ಸೇರಿ ಜಾವದ ವಿಸ್ತೀರ್ಣ 1,34,703 ಕಿ.ಮೀ. ಜನಸಂಖ್ಯೆ 7,61,03,000 (1961).

	ಜಾವ ಭೌಗೋಳಿಕ ವೈದೃಶ್ಯಗಳಿಂದ ಕೂಡಿದ ಪ್ರದೇಶ. ಇದು ಭೂಮಧ್ಯ ರೇಖೆಯ ಬಳಿ ನೆಲೆಗೊಂಡಿದೆ. ಅಗಾಧವಾಗಿ ಸುರಿಯುವ ಮಳೆಯಿಂದಾಗಿ ಈ ದ್ವೀಪದ ಬಹುಭಾಗದಲ್ಲಿ ಅಮೆಜಾóನ್ ಅಥವಾ ಕಾಂಗೋ ವಲಯದಲ್ಲಿ ಇರುವಷ್ಟು ನಿಬಿಡವಾದ ಉಷ್ಣವಲಯದ ಅರಣ್ಯಗಳುಂಟು. ಇಂಥ ಪ್ರದೇಶಗಳಲ್ಲಿ ಜನಸಂಖ್ಯೆ ಸಾಮಾನ್ಯವಾಗಿ ತೀರ ಕಡಿಮೆಯಾಗಿರುತ್ತದೆ. ಆದರೆ ಹೋಲಿಸಬಹುದಾದ ಯಾವುದೇ ಸದೃಶ ಆಕಾರ ಹಾಗೂ ವಲಯದ ಜನಸಂಖ್ಯೆಗಿಂತ ಇಲ್ಲಿಯ ಜನಸಂಖ್ಯೆ ತುಂಬ ಹೆಚ್ಚು. ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ರಾಜ್ಯಕ್ಕಿಂತ ಕಿರಿದಾಗಿರುವ ಈ ದ್ವೀಪದಲ್ಲಿ ಆ ದೇಶದ ಮೈನ್ನಿಂದ ದಕ್ಷಿಣ ಕ್ಯಾರಲೈನದವರೆಗಿನ ಎಲ್ಲ ಅಟ್ಲಾಂಟಿಕ್ ರಾಜ್ಯಗಳಲ್ಲಿಯ ಜನಸಂಖ್ಯೆಗಿಂತ ಹೆಚ್ಚು ಜನ ವಾಸವಾಗಿದ್ದಾರೆ. ಇಲ್ಲಿಯ ಜನಸಾಂದ್ರತೆ ಚ.ಮೈ.ಗೆ 900ಕ್ಕಿಂತ ಹೆಚ್ಚು. ಸಾಮಾನ್ಯವಾಗಿ ಇಂಥ ವಲಯಗಳಲ್ಲಿಯ ಜನ ಹಿಂದುಳಿದವರೂ ಆಲಸಿಗಳೂ ಆಗಿರುತ್ತಾರೆ. ಆದರೆ, ಜಾವದಲ್ಲಿಯ ಜನರು ಉದ್ಯಮಶೀಲರೂ ಸಾಹಸಿಗಳೂ ಆರೋಗ್ಯವಂತರೂ ಆಗಿದ್ದಾರೆ. ಎರಡನೆಯದಾಗಿ, ಇಂಥ ವಲಯ ಸಮುನ್ನತ ಸಂಸ್ಕøತಿಯ ನೆಲೆವೀಡೂ ಆಗಿರುವುದೂ ವಿರಳ. ಆದರೆ ಪ್ರಾಚೀನ ಭಾರತೀಯ ಸಂಸ್ಕøತಿಯ ಸಂಪರ್ಕ ಲಭ್ಯವಾಗಿದ್ದುದರಿಂದ ಜಾವ ವೈಶಿಷ್ಟ್ಯಪೂರ್ಣ ಪ್ರಾಚೀನ ಸಂಸ್ಕøತಿಯ ಆಡುಂಬೊಲವಾಗಿದೆ. ಐರೋಪ್ಯರೊಂದಿಗೆ ಉಂಟಾದ ದೀರ್ಘಕಾಲದ ಸಂಪರ್ಕಗಳು ಈ ಮೂಲಭೂತ ಸಂಸ್ಕøತಿಯ ಮೇಲೆ ಯಾವುದೇ ಗಮನಾರ್ಹ ಪ್ರಭಾವವನ್ನೂ ಬೀರಿಲ್ಲ. ಜಗತ್ತಿನ ಪೆಟ್ರೋಲಿಯಂ ಮತ್ತು ರಬ್ಬರ್ ಬೇಡಿಕೆಗಳನ್ನು ಗಮನಾರ್ಹ ಪರಿಮಾಣದಲ್ಲಿ ಪೂರೈಸುತ್ತಿರುವುದರಿಂದ ಇದು ಶ್ರೀಮಂತ ದ್ವೀಪವೂ ಆಗಿ ಪರಿಣಮಿಸಿದೆ. ಮಾನವಶಾಸ್ತ್ರದ ದೃಷ್ಟಿಯಿಂದಲೂ ಜಾವಕ್ಕೆ ಪ್ರಾಧಾನ್ಯವುಂಟು. ಸುಮಾರು 7,00,000 ವರ್ಷಗಳ ಹಿಂದೆ ಜೀವಿಸಿದ್ದನೆಂದು ನಂಬಲಾಗಿರುವ ಮಾನವ ವರ್ಗದ ಜೀವಿಯ ಅಸ್ಥಿಗಳನ್ನು ಜಾವ ದ್ವೀಪದ ನದಿಯೊಂದರ ದಡದಲ್ಲಿ ಯೂಜಿನ್ ಡೂಬ್ವಾ ಎಂಬ ಡಚ್ ವಿಜ್ಞಾನಿ 1891-92ರಲ್ಲಿ ಪತ್ತೆಹಚ್ಚಿದ. ಈ ಮಾನವನನ್ನು ಪಿತಿಕ್ಯಾಂತೋಪಸ್ ಎರೆಕ್ಟಸ್ ಎಂದು ಕರೆದಿದ್ದನಾದರೂ ಇಂದಿನ ವಿಜ್ಞಾನಿಗಳು ಈತನನ್ನು ಹೋಮೋ ಎರೆಕ್ಟಸ್ ಜಾವೆನ್ಸೀಸ್ ಎಂದು ಕರೆದಿದ್ದಾರೆ.

	ಜಾವ ಶಬ್ದದ ಉತ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. ಯವ ಎಂಬ ಧಾನ್ಯವನ್ನು ಸೂಚಿಸುವ ಸಂಸ್ಕøತ ಶಬ್ದದಿಂದಲೋ ಪಾಲಿನೇಷ್ಯನ್ ಸ್ಥಳ ನಾಮಗಳಾದ ಹವ ಮತ್ತು ಸವ ಎಂಬ ಶಬ್ದಗಳಿಂದಲೋ ಅರೇಬಿಯ ಮತ್ತಿತರ ವಿದೇಶೀ ರಾಷ್ಟ್ರಗಳನ್ನು ಹಾಗೂ ವೇಗವಾಗಿ ಗಮಿಸುವ ಕುದುರೆಯನ್ನು ಸೂಚಿಸುವ ಜವನ್ನಾ ಅಥವಾ ಯವನ ಶಬ್ದದಿಂದಲೊ ಜಾವ ಶಬ್ದ ರೂಪುದಳೆದಿರಬೇಕೆಂದು, ಹೀಗೆ ಬಗೆಬಗೆಯಾಗಿ, ವಿದ್ವಾಂಸರು ವಾದಿಸಿದ್ದಾರೆ.

	ಭೌತಲಕ್ಷಣ : ಕಿರಿ ಅಗಲದ ಈ ಉದ್ದನೆಯ ದ್ವೀಪವನ್ನು ನಿಮ್ನ ಕರಾವಳಿ ಬಯಲನ್ನುಳ್ಳ ಪರ್ವತಶ್ರೇಣಿಯೆಂದು ಭಾವಿಸಬಹುದು. ಈ ಪರ್ವತ ಶ್ರೇಣಿ ಹತ್ತು ಕಣಿವೆಗಳಿಂದ ವಿಭಕ್ತವಾಗಿದೆ. ಈ ಪರ್ವತವಲಯದಲ್ಲಿ ಅನೇಕ ಅಗ್ನಿಪರ್ವತಗಳಿವೆ. ಸುಮಾರು 112 ಅಗ್ನಿಪರ್ವತಗಳಿವೆಯೆಂಬುದು ಒಂದು ಅಂದಾಜು. ಇವುಗಳಲ್ಲಿ ಕೆಲವು ಇಂದು ನಂದಿಹೋಗಿದ್ದರೂ ಕೆಲವು ಇನ್ನೂ ಜೀವಂತವಾಗಿವೆ. 12,060 ಅಡಿ ಎತ್ತರವಿರುವ ಸಮೇರೂ ಇಂದಿಗೂ ಜೀವಂತವಾಗಿರುವ ಅಗ್ನಿಪರ್ವತ; ಜಾವದಲ್ಲೇ ಅತ್ಯಂತ ಎತ್ತರದ ಪರ್ವತ. ಪಶ್ಚಿಮ ಜಾವದಲ್ಲಿರುವ ಸಲಾಕ್ಟ್ (7,254`) 1669 ಮತ್ತು 1699ರಲ್ಲಿ ತೀವ್ರ ರೀತಿಯಲ್ಲಿ ಸ್ಫೋಟಿಸಿತ್ತು. ಆದರೆ ಇಂದು ನಂದಿಹೋಗಿದೆ. ಜಕಾರ್ತದ ಆಗ್ನೇಯಕ್ಕಿರುವ ಗೇಡ (9,705`) 1832ರಿಂದ ಈಚೆಗೆ ಹಲವು ಬಾರಿ ಸ್ಫೋಟಿಸಿವೆ. ಪಶ್ಚಿಮ ಜಾವದ ಗಾರೂತ್ ಎಂಬಲ್ಲಿಗೆ 12 ಮೈ. ನೈಋತ್ಯದಲ್ಲಿರುವ ಪಾಪಾಂಡಾಯಾನ್ (8,744`) 1772ರಲ್ಲಿ ಭಯಂಕರವಾಗಿ ಸ್ಫೋಟಿಸಿ ಸುಮಾರು 3,000 ಮಂದಿಯನ್ನು ಆಹುತಿ ತೆಗೆದುಕೊಂಡಿತ್ತು. ಗೆಲುಂಗ್‍ಗುಂಗ್ (7,221`) ಗಾರೂತ್ ನಗರಕ್ಕೆ 10 ಮೈ. ದೂರದಲ್ಲಿದೆ. ಇದು 1822ರಲ್ಲಿ ವಿನಾಶಕಾರಿಯಾಗಿ ಸ್ಫೋಟಿಸಿತ್ತು. ಸುಂಡ ಜಲಸಂಧಿಯ ಅಗ್ನಿಪರ್ವತ ದ್ವೀಪವಾದ ಕ್ರಾಕಟೋವ ಆಗಸ್ಟ್ 1883ರಲ್ಲಿ ಸ್ಫೋಟಗೊಂಡಿತ್ತು. ಆಧುನಿಕ ಕಾಲದಲ್ಲಿ ದಾಖಲೆಯಾಗಿರುವ ಅತ್ಯಂತ ಭಯಂಕರ ಸ್ಫೋಟಗಳಲ್ಲಿ ಇದೂ ಒಂದೆಂದು ಹೇಳಲಾಗಿದೆ. ಈ ಸ್ಫೋಟ ಪಶ್ಚಿಮ ಜಾವದಲ್ಲಿ ಸುಮಾರು 36,000 ಜನರನ್ನು ಬಲಿ ತೆಗೆದುಕೊಂಡುದಾಗಿ ಅಂದಾಜು ಮಾಡಲಾಗಿದೆ.		 (ನೋಡಿ- ಕ್ರಾಕಟೋವ)

	ಭೂಕಂಪಗಳೂ ಈ ದ್ವೀಪದಲ್ಲಿ ಸಾಮಾನ್ಯ. ಆದರೆ, ಇವುಗಳಲ್ಲಿ ಬಹುಮಟ್ಟಿನವು ತೀವ್ರವಲ್ಲ. ಅಗ್ನಿಪರ್ವತದ ಸ್ಫೋಟಕ್ಕೆ ಮೊದಲು ಹಾಗೂ ಅನಂತರ ಭೂಕಂಪಗಳು ಸಂಭವಿಸುತ್ತವೆ. ದಾಖಲಾಗಿರುವ ಭೂಕಂಪಗಳಲ್ಲಿ 3 ಭೂಕಂಪಗಳು ಸ್ಫೋಟಕ್ಕೆ ಮೊದಲೂ 19 ಭೂಕಂಪಗಳು ಸ್ಫೋಟದ ಜೊತೆಗೂ ಸಂಭವಿಸಿರುವುದಾಗಿ ತಿಳಿದುಬಂದಿದೆ. 1867ರಲ್ಲಿ ನಡೆದ ಭೂಕಂಪವೇ ಅತ್ಯಂತ ವಿನಾಶಕಾರಿ ಸ್ವರೂಪದ್ದೆಂದು ಹೇಳಲಾಗಿದೆ.

	ಜಾವದ ಪರ್ವತಶ್ರೇಣಿಯಲ್ಲಿ 10,000`ಗಿಂತ ಹೆಚ್ಚು ಎತ್ತರವಿರುವ ಶಿಖರಗಳ ಸಂಖ್ಯೆ ಸುಮಾರು 20. ಇವುಗಳಲ್ಲಿ ಅತ್ಯಂತ ಮುಖ್ಯವಾದವು ಸಮೇರೂ ಅಥವಾ ಮಹಾಮೇರೂ (12,060`), ಸ್ಲಾಮೆಟ್ (11,247), ಜಾಕ್‍ಯಕಾರ್ತದ ಬಳಿ ಇರುವ ಮೆರಾಪಿ (11,460`), ಪೂರ್ವ ಜಾವದಲ್ಲಿರುವ ಮೆರಾಪಿ (11,453`). ಮೈದಾನದ ಬಹುಭಾಗ ಇರುವುದು ಉತ್ತರ ಕರಾವಳಿಯಲ್ಲೇ. ಮಧ್ಯ ಜಾವದ ಕೇಡೂ ಮೇಲ್ನಾಡು ಕಣಿವೆ ಈ ದ್ವೀಪದಲ್ಲೇ ಅತ್ಯಂತ ಹೆಚ್ಚಿನ ಜನಸಾಂದ್ರತೆಯ ಪ್ರದೇಶ.

	ಜಾವದ ನದಿಗಳು ಬಹುಮಟ್ಟಿಗೆ ಉತ್ತರಾಭಿಮುಖವಾಗಿ ಹರಿಯುತ್ತವೆ. ಜಾವದ ಎಂಟು ಪ್ರಮುಖ ನದಿಗಳಲ್ಲಿ ಐದು ಜಾವ ಸಮುದ್ರವನ್ನೂ ಮೂರು ಹಿಂದೂ ಸಾಗರವನ್ನೂ ಸೇರುತ್ತವೆ. ಸೋಲೋ ನದಿ ಅತ್ಯಂತ ದೊಡ್ಡದು. ಇದರ ಉದ್ದ 335 ಮೈ. ಬ್ರಾಂಟಸ್ ಇನ್ನೊಂದು ನದಿ. ಇದರ ಉದ್ದ 195 ಮೈ. ತಜಿಲಿವುಂಗ್ ನದಿಯ ಉದ್ದ 50 ಮೈ. ಉಳಿದವು ಕಿರುನದಿಗಳು. ಈ ನದಿಗಳು ಮುಖ್ಯ ಪಾತ್ರಗಳಲ್ಲಿ ಸಾಗಣೆ ಹಾಗೂ ಸಂಚಾರಕ್ಕೆ ಯೋಗ್ಯವಾಗಿವೆಯಾದರೂ, ಬಹುವಾಗಿ ಇವು ನೀರಾವರಿಯ ಉದ್ದೇಶವನ್ನು ಪೂರೈಸುತ್ತವೆ.

	ವಾಯುಗುಣ : ಜಾವ ಸಮಭಾಜಕವೃತ್ತದ ನೆರೆಯಲ್ಲಿರುವ ಪ್ರದೇಶವಾದರೂ ಇಲ್ಲಿ ತೀವ್ರ ಉಷ್ಣತೆ ಇಲ್ಲ. ಹಗಲುರಾತ್ರಿಗಳು ಸಮವಾಗಿವೆ. ಪರ್ವತಗಳ, ಸಮುದ್ರಗಾಳಿಯ, ಗುಡುಗಿನಿಂದ ಕೂಡಿದ ಸುರಿಮಳೆಯ ಪ್ರಭಾವವೂ ಇದೆ. ಆದ್ದರಿಂದ ಇಲ್ಲಿಯ ವಾಯುಗುಣ ತೀರ ಅಹಿತಕರವಲ್ಲ. ಉತ್ತರ ಕರಾವಳಿಯಯಲ್ಲಿ ಗರಿಷ್ಠ ಉಷ್ಣತೆ. ಪರ್ವತ ಪ್ರದೇಶ ತಂಪು. 2,000` ಎತ್ತರದಲ್ಲಿ ಸಮಶೀತೋಷ್ಣ ವಾಯುಗುಣ. ಉನ್ನತ ಪ್ರದೇಶದಲ್ಲಿ —2.8ಲಿಅ(27ಲಿಈ) ಉಷ್ಣತೆ ಇರುವುದುಂಟು. ಜಕಾರ್ತದಲ್ಲಿ ಸರಾಸರಿ ದೈನಿಕ ಉಷ್ಣತೆಯ ಅಂತರ 6.6ಲಿ ಸೆಂ. (11.8ಲಿಈ); ಪರ್ವತ ಪ್ರದೇಶದಲ್ಲಿ 21.1ಲಿಅ. (70ಲಿಈ), ಜಕಾರ್ತದಲ್ಲಿ ಗರಿಷ್ಟ ಉಷ್ಣತೆ 35.8ಲಿಅ. (96.4ಲಿಈ), ಕನಿಷ್ಠ ಉಷ್ಣತೆ 18.9ಲಿಅ.(66ಲಿಈ) ದಕ್ಷಿಣ ಕರಾವಳಿಯಲ್ಲಿರುವ ಅಸೆಂಬೆಗಸಿನಲ್ಲಿ ಗರಿಷ್ಠ-ಕನಿಷ್ಠ ಉಷ್ಣತೆಗಳು ಅನುಕ್ರಮವಾಗಿ 37.2ಲಿಅ 

	ಜಾವ ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ವಾಯುವ್ಯ ಮಾನ್ಸೂನ್ ಪ್ರಭಾವಕ್ಕೆ ಒಳಗಾಗಿರುತ್ತದೆ. ಆಗಲೇ ವಿಶೇಷ ಮಳೆ; ಉತ್ತರದಲ್ಲಿ ಅಧಿಕ. ಇದರ ಪ್ರಭಾವ 12,000` ಎತ್ತರದ ವರೆಗೂ ವ್ಯಾಪಿಸಿರುವುದುಂಟು. ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಆಗ್ನೇಯ ಮಾನ್ಸೂನ್ ಪ್ರಭಾವ; ಆಗ ದಕ್ಷಿಣ ಕರಾವಳಿಯಲ್ಲಿ ಇಷ್ಟಷ್ಟು ಮಳೆಯಾಗುತ್ತದೆ. ತೀವ್ರ ಚಂಡಮಾರುತಗಳು ವಿರಳ. ಮಧ್ಯಾಹ್ನಾತ್ಪರ ಗುಡುಗು ಸಹಿತ ಮಳೆಯಾಗುತ್ತದೆ.

	ಮಳೆ ಪ್ರಾದೇಶಿಕವಾಗಿಯೂ ಶ್ರಾಯೀಣವಾಗಿಯೂ ವ್ಯತ್ಯಾಸವಾಗುತ್ತದೆ. ಜನವರಿ ಅತ್ಯಂತ ಹೆಚ್ಚಿನ ಮಳೆಯಾಗುವ ತಿಂಗಳು. ಜಕಾರ್ತದಲ್ಲಿ ವಾರ್ಷಿಕ ಸರಾಸರಿ ಮಳೆ 70.7”, ಚೆರಿಬಾನ್‍ನಲ್ಲಿ 90.38”, ಬಾನ್ಯುವಾಂಗೀಯಲ್ಲಿ 5372”, ಬೋಗಾರ್‍ನಲ್ಲಿ 165.94”, ಬಾನ್ಡುಂಗ್‍ನಲ್ಲಿ (2,395`), 77.2”, ದಕ್ಷಿಣ ಕರಾವಳಿಯ ಚೀಲಾಚಾಪ್‍ನಲ್ಲಿ 152.25”, ಕಾಲಿಸಾತ್‍ನಲ್ಲಿ (3,609`) 62.4”, ಅಸೆಂಬಾಗಸ್ ಅತ್ಯಂತ ಕಡಿಮೆ ಮಳೆಯಗುವ ಸ್ಥಳ (35.39”).

	ಸಸ್ಯ ಪ್ರಾಣಿಸಂಪತ್ತು : ಈ ದ್ವೀಪದ ಭೂಪ್ರದೇಶವೆಲ್ಲ ಅಗ್ನಿ ಪರ್ವತಗಳಿಂದ ಹೊರಬಿದ್ದ ಬೂದಿಯಿಂದ ಆವೃತವಾಗಿರುವುದರಿಂದ ಫಲವತ್ತಾಗಿದೆ. ಕಣಿವೆಗಳಲ್ಲಿ ಹಾಗೂ ಕರಾವಳಿಯ ಮೈದಾನದಲ್ಲಿ ಸಮತಲವಾಗಿ ಈ ಬೂದಿ ಹರಡಿಕೊಳ್ಳಲು ಮಳೆಯೂ ನೆರವಾಗಿದೆ. ಹೀಗಾಗಿ ಬೇಸಾಯ ಇಲ್ಲಿ ತುಂಬ ಸುಲಭ. ಆದ್ರ್ರವೂ ಬೆಚ್ಚನೆಯದೂ ಆದ ಇಲ್ಲಿಯ ವಾತಾರಣದಿಂದ ಹಾಗೂ ಭೂಮಟ್ಟದ ಬದಲಾವಣೆಗಳಿಂದ ಜಾವದಲ್ಲಿ ಅತ್ಯಂತ ಸಮೃದ್ಧವಾದ ಹಾಗೂ ವೈವಿಧ್ಯಮಯವಾದ ಸಸ್ಯಸಂಪತ್ತು ಉಂಟು. ಇಲ್ಲಿ ಸುಮಾರು 5,000ಕ್ಕೂ ಹೆಚ್ಚು ಸಸ್ಯಜಾತಿಗಳಿವೆ. ವಿಶ್ವವಿಖ್ಯಾತ ಬ್ಯೂಟಿನ್‍ಜೋರ್ಗಿನ್ ಸಸ್ಯೋದ್ಯಾನದಲ್ಲಿ ಬಹುಮಟ್ಟಿಗೆ ಈ ಎಲ್ಲ ಸಸ್ಯಜಾತಿಗಳನ್ನೂ ಕಾಣಬಹುದು.

	ಜಾವದ ವಿಶಿಷ್ಟ ವನ್ಯಮೃಗಗಳಲ್ಲೊಂದಾದ ಒಂಟಿಕೊಂಬಿನ ಖಡ್ಗಮೃಗ ನಷ್ಟಜೀವಿಯಾಗುತ್ತಿದೆ. ಹುಲಿ, ಕಾಡುಎತ್ತು, ಕಾಡುಹಂದಿ, ಚಿರತೆ, ಕಾಡುಬೆಕ್ಕು, ಜಿಂಕೆ ಹಲವು ಜಾತಿಯ ಕೋತಿಗಳು, ಬಾವಲಿ, ಅಳಿಲು, ಮುಳ್ಳುಹಂದಿ, ಇಲಿ, ಮೊಲ-ಇವು ಕೆಲವು ಇತರ ಪ್ರಾಣಿಗಳು. ಉರಗಗಳಲ್ಲಿ ಹೆಬ್ಬಾವು, ನಾಗರಹಾವು, ಮೊಸಳೆ ಮತ್ತು ಹಲ್ಲಿ ಇವೆ. ಕೆಲವು ಹಲ್ಲಿಗಳು ಎಷ್ಟು ಬಲವಾಗಿವೆಯೆಂದರೆ ಅವು ಕೋಳಿಗಳನ್ನೂ ಹಿಡಿಯುತ್ತವೆ. ಹಕ್ಕಿಗಳ ಜಾತಿಗಳು ಹೇರಳ. ಈ ದ್ವೀಪದಲ್ಲಿ 400 ಜಾತಿಯ ಪಕ್ಷಿಗಳೂ 500 ಜಾತಿಯ ಚಿಟ್ಟೆಗಳೂ ಇವೆಯೆಂದು ಒಂದು ಅಂದಾಜು. ಗಿಣಿ, ಬಾತು, ನವಿಲು ವಿಶೇಷ. ಹಕ್ಕಿಗಳನ್ನು ಸೆರೆಹಿಡಿಯಬಲ್ಲ ಜೇಡಗಳುಂಟು.

	ಕೃಷಿ: ಭೂಭಾಗದ ಸುಮಾರು 2/3 ಭಾಗ ವ್ಯವಸಾಯಕ್ಕೆ ಒಳಪಟ್ಟಿದೆ. ಇದರ ಸುಮಾರು 1/20 ಭಾಗ ಕಾಫಿ, ರಬ್ಬರ್ ಮೊದಲಾದುವುಗಳ ತೋಟಗಳಿಗೆ ಮೀಸಲಾಗಿದೆ. ಜಾವದ ಸಂಪದಭಿವೃದ್ಧಿಗೆ ಇವೇ ಮುಖ್ಯ ಕಾರಣ. ಕೆಳ ನಾಡಿನಲ್ಲಿರುವ ನೆಡುತೋಪು ಅಥವಾ ಕಾನುಗಳಲ್ಲಿ ರಬ್ಬರ್, ಹತ್ತಿ, ಕಬ್ಬು ಹೊಗೆಸೊಪ್ಪು ಮೊದಲಾದ ಬೆಳೆಗಳನ್ನು ತೆಗೆಯಲಾಗುತ್ತಿದೆ. ಉಪೋಷ್ಣವಲಯದ ಮೇಲ್ನಾಡುಗಳಲ್ಲಿ ಚಹ, ಕಾಫಿ ಮತ್ತು ಕ್ವಿನೈನನ್ನು ಉತ್ಪಾದಿಸಲಾಗುತ್ತಿದೆ. ವಿಶ್ವದ ಒಟ್ಟು ಕ್ವಿನೈನ್‍ನ ಬಹುಭಾಗವನ್ನು ಜಾವ ಒದಗಿಸುತ್ತದೆ. ಆದರೆ ಕಾಫಿಯ ಉತ್ಪಾದನೆಯಲ್ಲಿ ಇದು ಬ್ರಜಿûಲಿನ ಸ್ಪರ್ಧೆ ಎದುರಿಸಬೇಕಾಗಿ ಬಂದಿದೆ. ಈ ಕ್ಷೇತ್ರದಲ್ಲಿ ಇದು ಹಿಂದೆ ಬಿದ್ದಿದೆ. ಮರಗೆಣಸು (ಕ್ಯಸಾವ) ಮತ್ತು ಕಪೋಕ್‍ಗಳ ಉತ್ಪಾದನೆಯಲ್ಲಿ ಇದು ಮುಂದಿದೆ. ಪ್ರಪಂಚದ ಒಟ್ಟು ಉತ್ಪಾದನೆಯ ಬಹುಭಾಗ ಬರುವುದು ಇಲ್ಲಿಂದ. ಇವೆಲ್ಲ ಜಾವದ ರಫ್ತು ಬೆಳೆಗಳು.

	ವ್ಯವಸಾಯಕ್ಕೆ ಒಳಪಟ್ಟ ನೆಲದ ಸುಮಾರು 1/2 ಭಾಗ ಬತ್ತದ ಉತ್ಪಾದನೆಗೆ ಮೀಸಲು. ಗೆಣಸು, ಹುರುಳಿಕಾಯಿ, ಧಾನ್ಯಗಳು, ಹೊಗೆಸೊಪ್ಪು ಇತರ ಬೆಳೆಗಳು. ಭೂಮಿ ಫಲವತ್ತಾಗಿದ್ದರೂ ಬತ್ತದ ಉತ್ಪಾದನೆಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡುತ್ತಿದೆಯಾದರೂ ಇದರ ಉತ್ಪಾದನೆ ಅಲ್ಲಿಯ ಅವಶ್ಯಕತೆಗೆ ಸಾಲದಾಗಿ, ಅಕ್ಕಿಯನ್ನು ಆಮದು ಮಾಡಿಕೊಳ್ಳಬೇಕಾಗಿದೆ.

	ಕುರಿ, ಮೇಕೆ, ಕೋಳಿ ಮತ್ತು ಜಾನುವಾರುಗಳು ಧಾನ್ಯಾಹಾರಕ್ಕೆ ಪೂರಕವಾಗಿವೆ. ಸಮುದ್ರದಲ್ಲೂ ನದಿಗಳಲ್ಲೂ ದೊರೆಯುವ ಮೀನುಗಳನ್ನೂ ಆಹಾರವಾಗಿ ಉಪಯೋಗಿಸಲಾಗುತ್ತಿದೆ.

ಖನಿಜಸಂಪತ್ತು : ಜಾವದ ಖನಿಜಸಂಪತ್ತು ಹೆಚ್ಚಿಲ್ಲ. ದ್ವೀಪದ ಅನೇಕ ಕಡೆಗಳಲ್ಲಿ ಕಲ್ಲಿದ್ದಲ ನಿಕ್ಷೇಪಗಳಿವೆಯಾದರೂ ಇವುಗಳ ಪದರಗಳು ತುಂಬ ತೆಳುವಾಗಿರುವುದರಿಂದ ಇದರ ಗಣಿಗಾರಿಕೆ ಆರ್ಥಿಕವಾಗಿ ಲಾಭದಾಯಕವಲ್ಲ. ಸದ್ಯಕ್ಕೆ ಜಾಕ್‍ಯಕಾರ್ತದಲ್ಲಿ ಮಾತ್ರ ಗಮನಾರ್ಹ ಪರಿಮಾಣದಲ್ಲಿ ಕಲ್ಲಿದ್ದಲನ್ನು ತೆಗೆಯಲಾಗುತ್ತಿದೆ. ಬ್ಯಾಂಟಮ್ ಮತ್ತು ಇತರ ಎಡೆಗಳಲ್ಲಿ ಲಿಗ್ನೈಟಟ್ ನಿಕ್ಷೇಪಗಳುಂಟು. ತವರ ತಕ್ಕಮಟ್ಟಿಗೆ ದೊರಕುತ್ತಿದೆ. ಇದನ್ನು ರಫ್ತು ಮಾಡಲಾಗುತ್ತಿದೆ. ರೆಂಬಾಂಗ್, ಸುರಬೈಯ ಹಾಗೂ ಮದುರದಲ್ಲಿ ತೈಲ ನಿಕ್ಷೇಪಗಳುಂಟು. ಜಾವದ ದಕ್ಷಿಣ ಭಾಗದಲ್ಲಿ ಸುಣ್ಣಕಲ್ಲು ಮತ್ತು ಅಮೃತ ಶಿಲೆ ಹೇರಳವಾಗಿ ಲಭ್ಯವಾಗಿವೆ. ಅಲ್ಪ ಪರಿಮಾಣಗಳಲ್ಲಿ ದೊರೆಯುವ ಇತರ ಖನಿಜಗಳು ಲವಣಗಳು, ಗಂಧಕ, ಆಸ್ಫಾಲ್ಟ್, ನ್ಯಾಫ್ತಾ, ಮ್ಯಾಂಗನೀಸ್ ಮತ್ತು ಜೇಡಿಮಣ್ಣು.

ಜನಾಂಗಗಳು, ಸಂಸ್ಕøತಿ ಮತ್ತು ಕಲೆ : ಇಲ್ಲಿಯ ನಿವಾಸಿಗಳಲ್ಲಿ ಬಹುಭಾಗ ಮಲಯ ವಂಶಸ್ಥರಾಗಿದ್ದರೂ, ಇತಿಹಾಸದಲ್ಲಿ ಇವರನ್ನು ಸುಂದನೀಯರು ಹಾಗೂ ಜಾವನರು ಎಂಬುದಾಗಿ ವರ್ಗೀಕರಿಸಲಗಿದೆ. ಸುಂದನೀಯರು ಪಶ್ಚಿಮದಲ್ಲೂ ಜಾವನರು ಪೂರ್ವದಲ್ಲೂ ಬಹುತೇಕ ನೆಲೆಸಿದ್ದಾರೆ. ಸುಂದನೀಯರು ತೆಳುವರ್ಣದವರು, ಶುದ್ಧ ಮಲಯನ್ ಲಕ್ಷಣಗಳನ್ನು ಉಳಿಸಿಕೊಂಡಿದ್ದಾರೆ. ಇವರ ಕಣ್ಣುಗಳು ಮಂಗೋಲಿಯನರ ಕಣ್ಣುಗಳನ್ನು ಹೋಲುತ್ತವೆ. ಜಾವನರು ಗಾಢವರ್ಣದವರು. ಇವರ ಮೈಕಟ್ಟು, ಭಾಷೆ ಮತ್ತು ಸ್ವಭಾವದ ಬಹ್ವಂಶಗಳು ಹಿಂದುಗಳಿಂದ ದತ್ತ. ಹಿಂದುಗಳು ಇಲ್ಲಿ ಭವ್ಯ ಸಂಸ್ಕøತಿಯೊಂದನ್ನು ಬೆಳೆಸಿದರು. ಈ ಜನಾಂಗಗಳ ಜೊತೆಗೆ ಚೀನೀಯರೂ ಅರಬರೂ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೆಲೆಸಿದ್ದಾರೆ. ಈಗಿನ ಪ್ರಮುಖ ಮತ ಇಸ್ಲಾಮ್. ಈ ಮತದ ಪ್ರಭಾವ ಸ್ವಲ್ಪಮಟ್ಟಿಗೆ ಶಿಥಿಲವಾಗಿರುವ ಪೂರ್ವ ಜಾವದಲ್ಲಿ ಬದುಯಿ ಮತ್ತು ತೆಂಗ್-ಗೆರೆ ಎಂಬ ಎರಡು ಕಿರಿಯ ಸಮುದಾಯಗಳುಂಟು. ಆದಿಮ ಆತ್ಮತತ್ತ್ವವಾದದ ಮತ್ತು ಹಿಂದೂ ಧರ್ಮದ ಅಂಶಗಳು ತೆಕ್ಕೆಗೊಂಡಿರುವುದನ್ನೂ ದೈವೋಪಾಸನೆಗೆ ಸಂಬಂಧಿಸಿದ ಕೆಲವೊಂದು ನಂಬಿಕೆಗಳೂ ಸಂಪ್ರದಾಯಗಳೂ ಪ್ರಚಲಿತವಾಗಿರುವುದನ್ನೂ ಇಲ್ಲಿ ಕಾಣಬಹುದು. ಶ್ರೀಮಂತ ಕಲೆಯೊಂದು ಸ್ಥಳೀಯರಲ್ಲಿ ಉಳಿದು ಬೆಳೆದು ಬಂದಿದೆಯೆಂಬುದು ಇಲ್ಲಿ ಎದ್ದು ಕಾಣುತ್ತದೆ. ವಿಶಾಲವಾದ ದೇವಾಲಯಗಳು, ಸಾಂಪ್ರದಾಯಿಕ ನೃತ್ಯಗಳು, ಛಾಯಾನಾಟಕಗಳು ಈ ದೃಷ್ಟಿಯಿಂದ ಅತ್ಯಂತ ಗಮನಾರ್ಹ. ಲೋಹದ ಮೇಲಿನ ಕೆತ್ತನೆಯ ಕೆಲಸದ ಅಲಂಕಾರಿಕತೆ ಮತ್ತು ಕೌಶಲ ಬೆರಗುಗೊಳಿಸುವಂಥವು. ಇಲ್ಲಿಯ ಬಾಟಿಕ್ ಜವಳಿ ವಿಶ್ವದ ಅತ್ಯಂತ ಪ್ರಸಿದ್ಧ ಬಾಟಿಕ್ ಜವಳಿಯಲ್ಲಿ ಸ್ಥಾನಗಳಿಸಿದೆ.

	ಕೈಗಾರಿಕೆ : ಕೈಗಾರಿಕೆಗಳ ಬೆಳವಣಿಗೆಗೆ ಡಚ್ ಸರ್ಕಾರ ವಿಶೇಷ ಪ್ರೋತ್ಸಾಹ ಕೊಟ್ಟಿತು. ಪೆಟ್ರೋಲಿಯಮ್, ರಬ್ಬರ, ಹೊಗೆಸೊಪ್ಪು ಮೊದಲಾದವುಗಳ ಸಂಸ್ಕರಣ, ಚರ್ಮ ಹದ ಮಾಡುವುದು, ಜವಳಿ ಹಾಗೂ ಲೋಹವಸ್ತುಗಳ ಉತ್ಪಾದನೆ-ಇವು ಇಲ್ಲಿಯ ಪ್ರಮುಖ ಕೈಗಾರಿಕೆಗಳು. ತೈಲ ಬಾವಿಗಳು ಹಾಗೂ ಸಂಸ್ಕರಣಾಗಾರಗಳು ಉತ್ತರ-ಮಧ್ಯ ಜಾವದಲ್ಲಿ ನೆಲೆಗೊಂಡಿವೆ. ಇತರ ಕೈಗಾರಿಕೆಗಳು ಚದರಿದಂತಿವೆ.

	ಆಡಳಿತ : ಡಚ್ಚರ ಆಡಳಿತದ ಅಡಿಯಲ್ಲಿ ಜಾವವನ್ನು ಮೂರು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಪ್ರಾಂತ್ಯವೂ ಹಲವು ರೆಸಿಡೆನ್ಸಿಗಳಾಗಿ, ಪ್ರತಿ ರೆಸಿಡೆನ್ಸಿಯೂ ಹಲವು ರೀಜೆನ್ಸಿಗಳಾಗಿ, ಪ್ರತಿ ರೀಜೆನ್ಸಿಯೂ ಹಲವು ಜಿಲ್ಲೆಗಳಾಗಿ ವಿಂಗಡವಾಗಿದ್ದುವು. ಇಂಡೋನೇಷ್ಯ ಸ್ವಾತಂತ್ರ್ಯ ಗಳಿಸಿದ ಮೇಲೆ ರೆಸಿಡೆನ್ಸಿಗಳನ್ನೂ ಜಿಲ್ಲೆಗಳನ್ನೂ ರದ್ದು ಮಾಡಲಾಗಿದೆ. ಈಗ ಮೂರು ಹಂತಗಳಾಗಿ ಆಡಳಿತವನ್ನು ವ್ಯವಸ್ಥೆಗೊಳಿಸಲಾಗಿದೆ : 1 ಪ್ರಾಂತ್ಯ (ಪ್ರಾಪಿನ್ಸಿ), 2 ರೀಜೆನ್ಸಿ (ಕಾಬುಪಾಟೆನ್) ಮತ್ತು ಗ್ರಾಮ (ದೇಸ). ಜಾವದಲ್ಲಿ ಪಶ್ಚಿಮ, ಮಧ್ಯ ಮತ್ತು ಪೂರ್ವ ಜಾವ ಎಂಬ ಮೂರು ಪ್ರಾಂತ್ಯಗಳಿವೆ. ಮಹಾ ಜಕಾರ್ತ ಮತ್ತು ಜಾಕ್‍ಯಕಾರ್ತ ಎರಡು ಪ್ರತ್ಯೇಕ ಪ್ರಾಂತ್ಯಗಳು. ಪ್ರತಿ ಪ್ರಾಂತ್ಯಕ್ಕೂ ಆಂತರಿಕ ವಿಚಾರಗಳಲ್ಲಿ ಸ್ವಯಮಾಡಳಿತಾಧಿಕಾರವುಂಟು. ರಾಜ್ಯಪಾಲನನ್ನು ಆಯ್ಕೆ ಮಾಡಲಾಗುತ್ತದೆ. ಅವನು ಚುನಾಯಿತ ಪ್ರಾಂತೀಯ ವಿಧಾನಸಭೆಯ ಮತು ಆಡಳಿತ ಮಂಡಳಿಯ ಅಧ್ಯಕ್ಷ. ಆಡಳಿತ ಮಂಡಳಿಯನ್ನು ವಿಧಾನಸಭೆಯಿಂದ ಆರಿಸಲಾಗುತ್ತಿದೆ.

	ನಗರಗಳು : ಜಾವದಲ್ಲಿ ಜನಸಾಂದ್ರತೆ ಹೆಚ್ಚಾಗಿದ್ದರೂ ನಗರಗಳ ಸಂಖ್ಯೆ ಸೀಮಿತ. ಜಾವದ ಪಶ್ಚಿಮ ತುದಿಯಲ್ಲಿರುವ ಜಕಾರ್ತ ಅತ್ಯಂತ ದೊಡ್ಡ ನಗರ. ಇಂಡೋನೇಷ್ಯ ಗಣರಾಜ್ಯದ ರಾಜಧಾನಿ. ಜನಸಂಖ್ಯೆ 45,42,141 (1971 ಸು.). ಸುರಬೈಯ (12,73,000) ಎರಡನೆಯ ದೊಡ್ಡ ನಗರ. ಇದು ಪೂರ್ವ ತುದಿಯಲ್ಲಿದೆ. ಒಳನಾಡಿನ ಅತ್ಯಂತ ದೊಡ್ಡ ನಗರ ಬಾಂಡುಂಗ್ (11,14,000). ಸಮುದ್ರಮಟ್ಟದಿಂದ 2,346` ಎತ್ತರದಲ್ಲಿರುವುದರಿಂದ ಇಲ್ಲಿಯ ವಾಯುಗುಣ ಹಿತಕರ. ಜಕಾರ್ತ ಮತ್ತು ಬಾಂಡುಂಗ್ ನಡುವೆ ಇರುವ ನಗರ ಬ್ಯುಟಿನ್‍ಜೋರ್ಗ್. ಇಲ್ಲಿಯ ಸಸ್ಯೋದ್ಯಾನ ಜಗದ್ವಿಖ್ಯಾತ. ಇತರ ಪ್ರಮುಖ ನಗರಗಳು ಜಾಕ್‍ಯಕಾರ್ತ (3,94,000), ಸುರಕಾರ್ತ 3,67,626 (1961), ಸಮಾರಂಗ್ (5,03,153) ಮತ್ತು ಚಿರಬನ್ (1,87,000).

	ಸಾರಿಗೆ, ಸಂಪರ್ಕ : ಜಕಾರ್ತದ ಬಳಿ ಇರುವ ತಂದ್‍ಜೋಂಗ್ ಪ್ರಿಯೋಕ್, ಡಚ್ಚರು ನೌಕಾನೆಲೆಯಾಗಿ ಹಾಗೂ ಸಕ್ಕರೆ ರಫ್ತಿನ ಬಂದರಾಗಿ ಅಭಿವೃದ್ಧಿಪಡಿಸಿದ ಸುರಬೈಯ ಹಾಗೂ ಸೆಮಾರಂಗ್, ಚಿರಬನ್ ಮತ್ತು ಚೀಲಾಚಾಪ್ ಇಲ್ಲಿಯ ಮುಖ್ಯ ಬಂದರುಗಳು. ಕರಾವಳಿ ನೌಕೆಗಳು ಈ ಬಂದರುಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಒಳನಾಡಿನಲ್ಲಿ ಸುಮಾರು 3,000 ಮೈ.ರೈಲುಮಾರ್ಗಗಳೂ, 17,000 ಮೈ.ರಸ್ತೆಗಳೂ ಇವೆ. ಆಂತರಿಕ ವಿಮಾನ ವ್ಯವಸ್ಥೆ 13,000 ಮೈ. ಜಾಲ ಹೊಂದಿದೆ. ಅಂತರರಾಷ್ಟ್ರೀಯ ವಿಮಾನ ಸಂಸ್ಥೆಗಳು ಆಸ್ಟ್ರೇಲಿಯ, ಫಿಲಿಪೀನ್ಸ್, ಚೀನ, ಭಾರತ ಮತ್ತು ಪಾಕಿಸ್ತಾನಗಳ ಮೂಲಕ ಆಫ್ರಿಕ ಮತ್ತು ಯೂರೋಪಿನ ದೇಶಗಳಿಗೆ ಸಂಪರ್ಕ ಕಲ್ಪ್ಪಿಸಿವೆ.								(ಪಿ.ಜಿ.ಡಿ.)

	ಇತಿಹಾಸ : ಜಾವ ದ್ವೀಪ ಪ್ಲೀಸ್ಟೊಸೀನ್ ಯುಗದ ಆದಿಕಾಲದಿಂದ ಪ್ರಾಗಿತಿಹಾಸದಲ್ಲಿ ಪ್ರಾಮುಖ್ಯ ಪಡೆದಿದೆ. ಆ ಯುಗದ ಆದಿಭಾಗಕ್ಕೆ ಸೇರಬಹುದಾದ ಮೊಡ್ಜೊಕರ್ತೆನ್‍ಸಿಸ್ ಮಾನವನ ಪಳೆಯುಳಿಕೆಗಳು ಇಲ್ಲಿ ದೊರಕಿರುವ ಪ್ರಾಚೀನತಮ ಅವಶೇಷಗಳು. ಮಧ್ಯ ಪ್ಲೀಸ್ಟೊಸೀನ್ ಯುಗಕ್ಕೆ ಸೇರಿದ ಪಳೆಯುಳಿಕೆಗಳು ಪಟ್ಜಿತನ್ ಎಂಬಲ್ಲಿ ದೊರಕಿವೆ. ಇಲ್ಲಿ ಪಿತಿಕ್ಯಾಂತ್ರೋಪಸ್ ಮಾನವನ ಅವಶೇಷಗಳೊಂದಿಗೆ, ಆ ಮಾನವನಿಂದ ನಿರ್ಮಿತವಾದ ಕಲ್ಲಿನ ಆಯುಧಗಳೂ ದೊರಕಿವೆ. ಪ್ಲೀಸ್ಟೊಸೀನ್ ಯುಗದ ಅಂತ್ಯಭಾಗಕ್ಕೆ ಸೇರಿದ ಅವಶೇಷಗಳು ಸೋಲೋ ಕಣಿವೆಯ ಸಂಗಿರನ್ ಎಂಬಲ್ಲಿ ದೊರಕಿವೆ. ಹಳೆಯ ಮತ್ತು ಹೊಸ ಶಿಲಾಯುಗದ ಕಲ್ಲಿನ ಆಯುಧಗಳು ಮತ್ತು ಬೃಹತ್ ಶಿಲಾಸಮಾಧಿಯುಗದ ಕಂಚಿನ ಆಯುಧಗಳು ಜಾವದಲ್ಲಿ ಅನೇಕ ಕಡೆ ದೊರಕಿವೆ. ಜಾವ ದ್ವೀಪ ಬಹು ಪ್ರಾಚೀನಕಾಲದಿಂದಲೂ ಮಾನವನನ್ನು ಆಕರ್ಷಿಸಿತ್ತೆಂಬುದು ಇವುಗಳಿಂದ ವಿಶದವಾಗುತ್ತದೆ.

	ಕ್ರಿಸ್ತಶಕೆಯ ಆರಂಭದ ವರ್ಷಗಳಿಂದ ಜಾವ ದ್ವೀಪ ಭಾರತೀಯ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗಿತ್ತೆಂಬುದು ಗೊತ್ತಾಗುತ್ತದೆ. ಹಸ್ತಿನಾಪುರದ ಪಾಂಡವರಾಜನ ಮುಖ್ಯಮಂತ್ರಿಯಾದ ಅಜಿಶಕ ಎಂಬ ಭಾರತೀಯ ಮೊಟ್ಟಮೊದಲಿಗೆ ಜಾವಕ್ಕೆ ಹೋಗಿ ಅಲ್ಲಿಯ ರಾಕ್ಷಸ ಜನಗಳಿಗೆ ನಾಗರಿಕತೆಯನ್ನು ಕಲಿಸಿಕೊಟ್ಟನೆಂದು ಕೆಲವು ಕಥೆಗಳು ತಿಳಿಸುತ್ತವೆ. ಭಾರತದ ಕಳಿಂಗದೇಶದಿಂದ ಇಪ್ಪತ್ತು ಸಾವಿರ ಸಂಸಾರಗಳು ಜಾವ ದ್ವೀಪಕ್ಕೆ ಹೋಗಿ ನೆಲೆಸಿ ಅಲ್ಲಿ ನಾಗರಿಕತೆಯನ್ನು ಪ್ರಾರಂಭಿಸಿದುವೆಂದು ಮತ್ತೆ ಕೆಲವು ಕಥೆಗಳು ತಿಳಿಸುತ್ತವೆ. ಭಾರತೀಯ ಸಾಹಿತ್ಯದಲ್ಲಿ ಇದನ್ನು ಯಾವದ್ವೀಪ ಎಂದು ವ್ಯವಹರಿಸುತ್ತಿದ್ದರು. ರಾಮಾಯಣದಲ್ಲೂ ಯವ ದ್ವೀಪದ ಉಲ್ಲೇಖ ಕಾಣಸಿಗುತ್ತದೆ. 132ರಲ್ಲಿ ಯಾವ ದ್ವೀಪದ ರಾಜನಾದ ದೇವವರ್ಮ ಚೀನಕ್ಕೆ ರಾಯಭಾರಿಗಳನ್ನು ಕಳುಹಿಸಿದ್ದನೆಂದು ಚೀನೀ ವಂಶಾನುಚರಿತೆಗಳಲ್ಲಿ ಉಲ್ಲೇಖಿತವಾಗಿದೆ. 5ನೆಯ ಶತಮಾನದಲ್ಲಿ ಆಳಿದ ಗುಣವರ್ಮ ಜಾವ ದ್ವೀಪದಲ್ಲಿ ಬೌದ್ಧಮತ ಅಭಿವೃದ್ಧಿಯಾಗುವಂತೆ ಮಾಡಿದ. ಅಲ್ಲಿಯವರೆಗೆ ವೈದಿಕಧರ್ಮವೇ ವಿಶೇಷವಾಗಿ ಪ್ರಚಲಿತವಾಗಿತ್ತು. ಪೂರ್ಣವರ್ಮ ಮಹಾರಾಜ 6ನೆಯ ಶತಮಾನದಲ್ಲಿ ಆಳುತ್ತಿದ್ದುದು ಜಕಾರ್ತದ ಸಮೀಪದಲ್ಲಿ ದೊರಕಿರುವ ಶಾಸನಗಳಿಂದ ತಿಳಿಯುತ್ತದೆ. ಆದರೆ ಈ ಕಾಲದ ಇತಿಹಾಸ ಅಸ್ಪಷ್ಟ. ಇದೇ ಸಮಯದಲ್ಲಿ ಮಧ್ಯ ಜಾವದಲ್ಲಿ ಹೊಲಿಂಗ್ ಅಥವಾ ಕಳಿಂಗ ಎಂಬ ರಾಜ್ಯವಿತ್ತು. 7ನೆಯ ಶತಮಾನದ ಸಮಯದಲ್ಲಿ ಜಾವದಲ್ಲಿ ಜೈನಧರ್ಮ ವಿಶೇಷವಾಗಿ ಪ್ರಚಾರದಲ್ಲಿತ್ತೆಂದು ತುಕ್‍ಮಾನ್‍ನಲ್ಲಿ ದೊರಕಿರುವ ಶಾಸನಗಳ ಆಧಾರದ ಮೇಲೆ ಹೇಳಲಾಗಿದೆ.

	ಇಂಡೊನೇಷ್ಯದ ದ್ವೀಪಗಳನ್ನೆಲ್ಲ ಒಂದುಗೂಡಿಸಿ ಆಳಿದ ಶೈಲೇಂದ್ರರು ಜಾವದವರೆಂಬುದು ಅನೇಕರ ಅಭಿಪ್ರಾಯವಾಗಿದ್ದರೂ, ಜಾವದ ಇತಿಹಾಸ 8ನೆಯ ಶತಮಾನದಿಂದ ಸ್ಪಷ್ಟವಾಗುತ್ತದೆ. ಈ ಶತಮಾನದ ಆದಿಭಾಗದಲ್ಲಿ ಮಧ್ಯ ಜಾವದಲ್ಲಿ ಮತರಾಂ ಎಂಬ ರಾಜ್ಯ ಸ್ಥಾಪನೆಯಾಯಿತು. ಇದನ್ನು ಸ್ಥಾಪಿಸಿದವನು ಸನ್ನಹ. ಇವನ ಅನಂತರ ಇವನ ಅಳಿಯನಾದ ಸಂಜಯ ರಾಜನಾದ. ಆದರೆ ಶೈಲೇಂದ್ರರ ಪ್ರಭಾವ ಹೆಚ್ಚಾದಾಗ ಈ ವಂಶದ ಅರಸರು ಮಧ್ಯ ಜಾವದಿಂದ ಪೂರ್ವ ಜಾವಕ್ಕೆ ಹೋದರು. ಆದರೂ ಇವರು ಶೈಲೇಂದ್ರರ ಆಡಳಿತಕ್ಕೆ ಒಳಪಟ್ಟರು. ಸು. 930ರಲ್ಲಿ ಅಧಿಕಾರಕ್ಕೆ ಬಂದ ಸಿಂಡಕ್ ಮಹಾರಾಜನ ಕಾಲದಲ್ಲಿ ಆಡಳಿತಸ್ಥಾನ ಮಧ್ಯ ಜಾವದಿಂದ ಪೂರ್ವ ಜಾವಕ್ಕೆ ಬದಲಾಯಿಸಲ್ಪಟ್ಟಿತು. ಮತರಾಂ ರಾಜ್ಯ ರಾಜಕೀಯ ದೃಷ್ಟಿಯಿಂದ ಪ್ರಾಮುಖ್ಯ ಪಡೆಯದಿದ್ದರೂ, ಸಾಹಿತ್ಯಿಕ ದೃಷ್ಟಿಯಿಂದ ಗಮನಾರ್ಹವಾದ್ದು. ಸಂಸ್ಕøತ ಸಾಹಿತ್ಯದಿಂದ ಪ್ರೇರಿತವಾಗಿ ರಾಮಾಯಣ, ಅಮರಮಾಲಾ ಮುಂತಾದ ಅನೇಕ ಗ್ರಂಥಗಳು ಜಾವ ಭಾಷೆಯಲ್ಲಿ ಈ ಕಾಲದಲ್ಲಿ ರಚಿತವಾದುವು.
ಪೂರ್ವ ಜಾವದ ಬೆಳವಣಿಗೆಗೆ ಕಾರಣನಾದ ಸಿಂಡಕ್ ಮಹಾರಾಜ ಶ್ರೀ ಈಶಾನ ವಿಕ್ರಮ ಧರ್ಮೋತ್ತುಂಗ ದೇವ ಎಂಬ ಹೆಸರಿನಿಂದ 929 ರಿಂದ 20 ವರ್ಷಗಳ ಕಾಲ ರಾಜ್ಯವಾಳಿದ. ಇವನ ಕಾಲದಲ್ಲಿ ಶೈವ ಧರ್ಮಕ್ಕೆ ವಿಶೇಷ ಪ್ರೋತ್ಸಾಹವಿತ್ತು. ಇವನ ಅನಂತರ ಇವನ ಮಗಳಾದ ಈಶಾನತ್ತುಂಗವಿಜಯಾ ಆಳಿದಳು. ಈಕೆ ಬೌದ್ಧಮತಕ್ಕೆ ವಿಶೇಷ ಪ್ರಾಮುಖ್ಯ ಕೊಟ್ಟಳು. ಸ್ವಲ್ಪ ಕಾಲದ ಅನಂತರ ಆಳಿದ ಧರ್ಮವಂಶನು ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಿದ. ಇವನ ಕಾಲದಲ್ಲಿ ಮಹಾಭಾರತ ಜಾವ ಭಾಷೆಗೆ ಅನುವಾದವಾಯಿತು. ಧರ್ಮವಂಶನ ಅನಂತರ ಆಳಿದ ಏರ್ಲಂಗ (1019-49) ಜಾವ ಇತಿಹಾಸದಲ್ಲೇ ಅತ್ಯಂತ ಪ್ರಮುಖ. ಇವನು ಅರಾಜಕತೆಯನ್ನು ಹೋಗಲಾಡಿಸಿ ಜಾವ ದ್ವೀಪವನ್ನು ಒಂದುಗೂಡಿಸಿದ. ಇವನ ಕಾಲದಲ್ಲಿ ರಾಜ್ಯ ಸುಭಿಕ್ಷವಾಗಿತ್ತು. ಏರ್ಲಂಗ ಕವಿಗಳಿಗೆ ಆಶ್ರಯದಾತನಾಗಿದ್ದ. ಇವನ ಆಶ್ರಯದಲ್ಲಿ ಕಣ್ವ ಕವಿ ಅರ್ಜುನ ವಿವಾಹ ಎಂಬ ಕಾವ್ಯವನ್ನು ರಚಿಸಿದ. ಇವನ ಶರೀರವನ್ನು ಹೂಳಲಾದ ಬಿಲ್ಹನ್‍ನಲ್ಲಿರುವ ಗರುಡವಾಹನ ವಿಷ್ಣುವಿಗ್ರಹ ಒಂದು ಉತ್ತವು ಶಿಲ್ಪ. ಏರ್ಲಂಗ ತನ್ನ ರಾಜ್ಯವನ್ನು ಎರಡು ಭಾಗಗಳಾಗಿ ಮಾಡಿ ತನ್ನ ಇಬ್ಬರು ಮಕ್ಕಳಿಗೆ ಹಂಚಿದ. ಇವುಗಳಲ್ಲಿ ಒಂದು ರಾಜ್ಯ ಕಡಿರಿ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿತು. ಜಯವರ್ಷ ದಿಗ್ವಿಜಯನೇ ಈ ರಾಜ್ಯದ ಮೊದಲನೆಯ ದೊರೆ. ಆನಂತರ ಕಾಮೇಶ್ವರ, ಕೃತಜಯ ಮೊದಲಾದ ರಾಜರು ಆಳಿದರು. ಈ ರಾಜ್ಯ ಸಾಹಿತ್ಯದೃಷ್ಟಿಯಿಂದ ಮುಖ್ಯವಾದ್ದು. ಕೃಷ್ಣಾಯನ, ಸ್ಮರದಹನ, ಭಾರತಯುದ್ಧ, ಹರಿವಂಶ, ಘಟೋತ್ಕಚ, ಸುಮನಸಾಂತಕ ಮೊದಲಾದ ಜಾವ ಭಾಷೆಯ ಗ್ರಂಥಗಳು ರಚಿತವಾದುವು. ಅಂಗ್ ರಕ್ ಎಂಬವನು ಕಡಿರಿಯ ರಾಜ ಕೃತಜಯನನ್ನು ಸೋಲಿಸಿ ಸಿಂಘಸಾರಿ ಎಂಬ ರಾಜ್ಯವನ್ನು 1222 ರಲ್ಲಿ ಸ್ಥಾಪಿಸಿದ. ಈ ವಂಶದ ರಾಜರುಗಳಲ್ಲಿ ಮುಖ್ಯನಾದವನೆಂದರೆ ಕೃತನಗರ ಮಹಾರಾಜ (1254-92). ಇವನು ಅನೇಕ ಯುದ್ಧಗಳನ್ನು ಮಾಡಿ ಸಿಂಫ್‍ಸಾರಿ ರಾಜ್ಯವನ್ನು ಬಲಪಡಿಸಿದ. ಆದರೆ 1292ರಲ್ಲಿ ಇವನು ಕೊಲ್ಲಲ್ಪಟ್ಟ. ಸಿಂಫ್‍ಸಾರಿ ರಾಜ್ಯ ನಾಶವಾಯಿತು. 1293ರಲ್ಲಿ ವಿಜಯನೆಂಬುವನು ಮಜಪಹಿತ್ ರಾಜ್ಯವನ್ನು ಸ್ಥಾಪನೆ ಮಾಡಿದ. ಇವನು ಕೃತರಾಜಸ ಜಯವರ್ಧನ ಎಂಬ ಹೆಸರಿನಿಂದ ಆಳಿದ. ಜಯನಗರ, ರಾಜಸನಗರ ಮತ್ತು ಕೃತವಿಜಯ ಎಂಬವರು ಈ ವಂಶದ ಅರಸರು. ಈ ಕಾಲದಲ್ಲಿ ಆಂತರಿಕ ಕಲಹಗಳಿಂದ ಮತ್ತು ನೆರೆರಾಜರ ಯುದ್ಧಗಳಿಂದ ಜಾವ ದ್ವೀಪ ಬಲಹೀನವಾಯಿತು. ಮಜಪಹಿತ್ ರಾಜ್ಯದ ಮುಖ್ಯ ಕೊಡುಗೆಯೆಂದರೆ ನಾಗರಕೃತಾಗಮ ಎಂಬ ಗ್ರಂಥ.

15ನೆಯ ಶತಮಾನದ ಆದಿಭಾಗದಲ್ಲಿ ಜಾವದಲ್ಲಿ ಮಹಮ್ಮದೀಯ ವ್ಯಾಪಾರಿಗಳ ಶಿಬಿರವಿತ್ತು. ಅವರಿಗೆ ರಾಜಕೀಯದಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಆದರೆ ಆ ಶತಮಾನದ ಕೊನೆಯ ಭಾಗದಲ್ಲಿ ಅವರು ರಾಜಕೀಯವನ್ನು ಪ್ರವೇಶಿಸಿದರು. 16ನೆಯ ಶತಮಾನದ ಪ್ರಾರಂಭದಲ್ಲಿ ಹಿಂದೂ ರಾಜ್ಯಗಳು ನಾಶವಾಗಿ ಜಾವ ಮಹಮ್ಮದೀಯರ ವಶವಾಯಿತು. ಜಾವದಲ್ಲಿ ಇಸ್ಲಾಮ್ ಪ್ರಭಾವ ಬೆಳೆಯಿತು. ಅನೇಕ ಮಹಮ್ಮದೀಯ ರಾಜರು ಜಾವದಲ್ಲಿ ಪಾಳೆಯಪಟ್ಟುಗಳನ್ನು ಸ್ಥಾಪಿಸಿಕೊಂಡು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು. ಇವುಗಳಲ್ಲಿ ಮತರಾಂ ಮತ್ತು ಜಾಕ್‍ಯಕಾರ್ತ ಮುಖ್ಯವಾದುವು. ಆ ಶತಮಾನದ ಕೊನೆಯಲ್ಲಿ ವ್ಯಾಪಾರದ ಸೋಗಿನಿಂದ ಬಂದ ಡಚ್ಚರು ಜಾವದ ಅನೇಕ ದ್ವೀಪಗಳನ್ನು ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡು ತಮ್ಮ ವಸಾಹತುಗಳನ್ನು ಸ್ಥಾಪಿಸಿದರು.							(ಎಂ.ಕೆ.ಬಿ.; ಎ.ವಿ.ಎನ್.)

ವಾಸ್ತು, ಶಿಲ್ಪ : ಜಾವದ ವಾಸ್ತುಶಿಲ್ಪವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು : 1. ಇಂಡೊ-ಜಾವನೀಸ್ ಶೈಲಿ 2. ಜಾವನೀಸ್ ಶೈಲಿ, 3. ಮಹಮ್ಮದೀಯ ಶೈಲಿ, ಮೊದಲನೆಯ ಶೈಲಿಯಲ್ಲಿ ಭಾರತೀಯ ಪ್ರಭಾವ ವಿಶೇಷವಾಗಿ ಕಾಣಬರುತ್ತದೆ. ಕ್ರಿಸ್ತಶಕದ ಪ್ರಾರಂಭದಿಂದ 10ನೆಯ ಶತಮಾನದವರೆಗಿನ ಈ ಶೈಲಿಯಲ್ಲಿ ಅದ್ಭುತ ಕಲಾಕೃತಿಗಳು ನಿರ್ಮಾಣವಾದುವು. ಎರಡನೆಯ ಶೈಲಿಯಲ್ಲಿ ಜಾವನೀಸ್ ಲಕ್ಷಣಗಳೇ ವಿಶೇಷವಾಗಿ ಕಾಣುತ್ತವೆ. ಸಿಂಘ್‍ಸಾರಿ, ಮಜಪಹಿತ್ ಮುಂತಾದೆಡೆಗಳಲ್ಲಿ ಈ ಶೈಲಿಯ ದೇವಾಲಯಗಳು ಕಾಣಬರುತ್ತವೆ. ಜಾವ 16ನೆಯ ಶತಮಾನದಲ್ಲಿ ಮಹಮ್ಮದೀಯರ ಆಳ್ವಿಕೆಗೆ ಸೇರಿತು. ಅವರ ಆಳ್ವಿಕೆಯ ಕಾಲದ್ದು ಮೂರನೆಯ ಶೈಲಿ.

ಮಧ್ಯದಲ್ಲಿರುವ ಡೀಂಗ್ ಪ್ರಸ್ಥಭೂಮಿ ಇಂಡೊ-ಜಾವನೀಸ್ ವಾಸ್ತುಶೈಲಿಯ ತವರು. ಇದು ಶೈವ ದೇವಾಲಯಗಳ ಪ್ರದೇಶ. ಸುಮಾರು ನಲವತ್ತಕ್ಕೂ ಹೆಚ್ಚು ದೇವಾಲಯಗಳು 7ನೆಯ ಶತಮಾನದಿಂದಲೇ ನಿರ್ಮಾಣವಾಗಲು ಪ್ರಾರಂಭವಾದುವು. ಇಲ್ಲಿಯ ದೇವಾಲಯಗಳನ್ನು ಚಂಡಿ ಎಂದು ಕರೆಯುತ್ತಾರೆ. ಇವೆಲ್ಲವೂ ಸಾಮಾನ್ಯವಾಗಿ ಕಲ್ಲಿನಿಂದ ಕಟ್ಟಿದವು. ಇವುಗಳದು ಚೌಕತಲದ ವಿನ್ಯಾಸ. ಇವುಗಳಲ್ಲಿ ಜಗಲಿ, ಚೌಕವಾದ ಗರ್ಭಗೃಹ, ಅದರ ಮೇಲೆ ಶಿಖರ ಇವೆ. ಇವು ಮಹಾಬಲಿಪುರದ ರಥಗಳನ್ನು, ಇಲ್ಲವೇ ಬಾದಾಮಿಯ ಚಾಲುಕ್ಯರ ದೇವಾಲಯಗಳನ್ನು ನೆನಪಿಗೆ ತರುತ್ತವೆ. ಗೋಡೆಗಳ ಮೇಲೆ ಅರೆ ಉಬ್ಬು ಶಿಲ್ಪಗಳಿರುತ್ತವೆ. ಅಲ್ಲಿಯ ಕೀರ್ತಿಮುಖ, ಸಿಂಹಮುಖ, ಲತಾಲಂಕಾರ ಮುಂತಾದವುಗಳಲ್ಲಿ ಭಾರತೀಯತೆ ಎದ್ದು ಕಾಣುತ್ತದೆ. ಡೀಂಗ್ ಪ್ರಸ್ಥಭೂಮಿಯ ದೇವಾಲಯಗಳಿಗೆ ಚಂಡಿ ಭೀಮ, ಚಂಡಿಅರ್ಜುನ ಮುಂತಾದ, ಮಹಾಭಾರತದ ಪ್ರಮುಖ ವ್ಯಕ್ತಿಗಳ, ಹೆಸರುಗಳಿವೆ. ಮಹಾಬಲಿಪುರದ ರಥಗಳು ಇವಕ್ಕೆ ಮಾದರಿಗಳಾಗಿದ್ದಿರಬಹುದೆಂದು ತೋರುತ್ತದೆ. ಚಂಡಿ ಪವನ್, ಚಂಡಿ ಮೆಂದುತ್ ದೇಗುಲಗಳು ಇಂಡೊ-ಜಾವನೀಸ್ ಶೈಲಿಯ ಕಟ್ಟಡಗಳಲ್ಲಿ ಮುಖ್ಯವಾದವು. 800ರಲ್ಲಿ ನಿರ್ಮಿತವಾದ ಚಂಡಿಮೆಂದುತ್ ಎತ್ತರವಾದ ಜಗಲಿಯ ಮೇಲೆ ನಿಂತಿರುವ ಚಚ್ಚೌಕ ದೇವಾಲಯ. ಚಂಡಿಪವನ್ ಕುಬೇರನಿಗಾಗಿ ರಚಿತವಾದ ಉತ್ತಮ ದೇಗುಲ.
ಬೋರಬದೂರಿನ ಸ್ತೂಪ, ವಿಶ್ವದ ವಾಸ್ತು ಶಿಲ್ಪ ಇತಿಹಾಸದಲ್ಲೇ ಖ್ಯಾತವಾದ್ದು. ಸುಮಾರು 825ರಲ್ಲಿ ಪ್ರಾರಂಭವಾದ ಈ ಸ್ತೂಪದ ನಿರ್ಮಾಣ ಪೂರ್ಣವಾಗಲು ಮೂವತ್ತು ವರ್ಷಗಳು ಬೇಕಾದುವು. ಇದನ್ನು ಒಂದು ಸಣ್ಣ ಬೆಟ್ಟದ ಮೇಲೆ ಕಟ್ಟಲಾಗಿದೆ. ಇದು ಒಂಬತ್ತು ಹಂತಗಳಲ್ಲಿರುವ ಸ್ತೂಪ. ಮೊದಲನೆಯ ಆರು ಹಂತಗಳು ಚೌಕಾಕಾರವಾಗಿಯೂ ಮೇಲಿನ ಮೂರು ಹಂತಗಳು ವೃತ್ತಾಕಾರವಾಗಿಯೂ ಇವೆ. ಮೇಲ್ಗಡೆ ಮಧ್ಯದಲ್ಲಿ ಘಂಟಾಕೃತಿಯ ಸ್ತೂಪವಿದೆ. ಪ್ರತಿಯೊಂದು ಹಂತದ ಗೋಡೆಗಳಲ್ಲೂ ಗೂಡುಗಳುಂಟು. ಅವುಗಳಲ್ಲಿ ಧ್ಯಾನಿಬುದ್ಧನ ಶಿಲ್ಪಗಳಿವೆ. ಸುಮಾರು 500 ಬುದ್ಧ ಶಿಲ್ಪಗಳೂ 1,300ಕ್ಕೂ ಹೆಚ್ಚು ಶಿಲ್ಪಫಲಕಗಳೂ ಇರುವ ಇಂಥ ಸ್ತೂಪ ಇನ್ನೆಲ್ಲೂ ಇಲ್ಲ. ಬೋರಬದೂರಿನ ಸ್ತೂಪ ತಾಂತ್ರಿಕ ಬೌದ್ಧಧರ್ಮದ ಸಂಕೇತವೆಂದೂ ಕೆಲವರು ಭಾವಿಸುತ್ತಾರೆ. ಇಡೀ ಸ್ತೂಪ ಕೆಳಗಿನಿಂದ ಮೇಲಕ್ಕೆ ದಾನವತೆಯಿಂದ ಮಾನವತೆಯ ಮೂಲಕ ದೈವತ್ವದ ಕಡೆಗೆ ಸಾಗುವ ಒಂದು ಪ್ರಯತ್ನ. ಸುತ್ತಿ ಬಳಸಿ ಪ್ರಯತ್ನವನ್ನು ಮುಂದುವರಿಸಿ ಪ್ರತಿಯೊಬ್ಬನೂ ತನ್ನ ಗುರಿಯನ್ನು ಮುಟ್ಟಬೇಕು; ಕೇಂದ್ರದ ಸ್ತೂಪವನ್ನು ತಲಪಬೇಕು. ಹಾದಿ ತಪ್ಪಿದಾಗ ಎಚ್ಚರಗೊಳಿಸಲು ಗೂಡುಗಳಲ್ಲಿ ಬುದ್ಧನ ಶಿಲ್ಪಗಳಿವೆ. ಇವು ನಮ್ಮನ್ನು ಋಜು ಮಾರ್ಗದಲ್ಲಿ ಒಯ್ಯುತ್ತವೆ. ವಾಸ್ತು ಶಿಲ್ಪದೃಷ್ಟಿಯಿಂದ ಮತ್ತು ಧಾರ್ಮಿಕ ದೃಷ್ಟಿಯಿಂದ ಇದೊಂದು ಮಹತ್ತರ ಕೃತಿ.

ಪ್ರಾಂಬಾನಾಮ್‍ನಲ್ಲಿರುವ ಹಿಂದೂ ಮತ್ತು ಬೌದ್ಧ ದೇವಾಲಯಗಳು ಗಮನಾರ್ಹವಾದುವು. ಚಂಡಿ ಸಾರಿ, ಚಂಡಿ ಕಲಶನ್, ಚಂಡಿ ಸೇವು ಇವುಗಳಲ್ಲಿ ಮುಖ್ಯವಾದವು. ಜಾವದಲ್ಲಿರುವ ಹಿಂದೂ ದೇವಾಲಯಗಳಲ್ಲಿ ಅತ್ಯಂತ ಶ್ರೇಷ್ಠವಾದವು ಲೋರಜೊಂಗ್ರೊಂಗ್‍ನಲ್ಲಿವೆ. ಸುಮಾರು 9ನೆಯ ಶತಮಾನದ ಉತ್ತರಾರ್ಧದಲ್ಲಿ ರಚಿತವಾದ ಈ ದೇವಾಲಯಗಳಲ್ಲಿ ಕಾಣಬರುವ ಶಿಲ್ಪಕಲೆ ಬೋರಬದೂರಿನದನ್ನೂ ಮೀರಿಸುತ್ತದೆ. ಪೂರ್ವ ಜಾವದಲ್ಲಿ ಚಂಡಿ ಸಂಘಸಾರಿ, ಪನತರನ್, ಚಂಡಿ ಜಾಗೋ ಮುಖ್ಯವಾದವು. ಪನರತನ್‍ನಲ್ಲಿ ವಾಸ್ತುಶಿಲ್ಪ ನಿರ್ಮಾಣಕಾರ್ಯ 12ನೆಯ ಶತಮಾನದಲ್ಲಿ ಆರಂಭವಾಗಿ 14ನೆಯ ಶತಮಾನದವರೆಗೆ ಮುಂದುವರೆಯಿತು. ರಾಮಾಯಣದ ಕಥೆಗೆ ಸಂಬಂಧಿಸಿದ ಶಿಲ್ಪಗಳು ಇಲ್ಲಿ ವಿಶೇಷವಾಗಿವೆ. ಇವುಗಳಲ್ಲಿ ಅಲಂಕಾರ ಪ್ರವೃತ್ತಿ ಎದ್ದು ಕಾಣುತ್ತದೆ. ಇಲ್ಲಿ ಬೃಹತ್‍ಗಾತ್ರದ ಶಿಲ್ಪಗಳು ಕಡಿಮೆ. ಅರೆಉಬ್ಬು ಶಿಲ್ಪಗಳು ವಿಶೇಷ. ಬೆಲಹನ್‍ನಲ್ಲಿರುವ ವಿಷ್ಣು ವಿಗ್ರಹ ಬಹು ಮುಖ್ಯವಾದ್ದು. ಇದು ಈ ಶೈಲಿಯ ಅತ್ಯುತ್ತಮ ಕೃತಿಯೆಂದು ಪರಿಗಣಿತವಾಗಿದೆ. ಸಿಂಘಸಾರಿಯ ನಿರ್ಮಾಣದ ಕಾಲದಲ್ಲಿ ನಿರ್ಮಿಸಲಾದ ಚಂಡಿ ಕಿಡಲ್‍ನ ಶಿವ, ಸಿಂಘ ಸಾರಿಯಪ್ರಜ್ಞಾ ಪಾರಿಮಿತ, ಗಣೇಶ, ಮಹಿಷಾಸುರಮರ್ದಿನಿ, ಅಗಸ್ತ್ಯ ಮುಂತಾದವು ಪೂರ್ವ ಜಾವದ ಶಿಲ್ಪಗಳಲ್ಲಿ ಮಹೋನ್ನತ ಕೃತಿಗಳು.		(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ